[Advaita-l] Dakshinamurti Stotram rendered in Kannada
V Subrahmanian
v.subrahmanian at gmail.com
Mon Apr 20 13:21:08 EDT 2020
Vidvan Vishwanath Sunkasala ರವರ ದಕ್ಷಿಣಾಮೂರ್ತಿಸ್ತೋತ್ರದ ವಿವರಣೆಯಿರುವ ವೀಡಿಯೋ
ನೋಡಿದವನಿಗೆ ಬರೆಯಬೇಕನಿಸಿದ್ದು
****†****
ಕನ್ನಡಿ ತೋರುವ ಬಿಂಬದ ಹಾಗೆಯೆ
ನಮ್ಮೊಳು ಮೂಡಿಹ ಈ ಜಗವು
ನೋಡುವ ಕಂಗಳು ನೋಡಿಹುದೆಲ್ಲವು
ನೋಟವು ಮುಗಿದೊಡೆ ಮುಗಿಯುವುವು
ಕನಸಲಿ ಕಂಡಿಹುದೆಲ್ಲವು ಕನಸಲಿ
ನಿಜವೆಂಬಂತೆಯೆ ತೋರುವುದು
ಎಚ್ಚರವಾದೊಡೆ ಬರಿ ಸುಳ್ಳೆಂಬುದು
ಕ್ಷಣಮಾತ್ರದಿ ಮನವರಿಯುವುದು
ನಿದ್ದೆಯಲಿದ್ದವ ನಿದ್ದೆಯಲಿರುವೆನು
ಎಂಬುದು ನಿದ್ದೆಯಲಿದ್ದಾಗ
ಅರಿತವನರಿವನು ಎಚ್ಚರದರ್ಥವ
ಎಚ್ಚರವೇ ಸಂತತವಾದಾಗ
ಬೀಜದಿ ಕಾಣದ ಮೊಳಕೆಯ ಹಾಗೆಯೆ
ಮೊದಲೀ ವಿಶ್ವವು ಗುರುತರದ
ಚೇತನದೊಳಗಣ ಚಲಿಸದ ಸ್ಥಿತಿಯಲಿ
ಮಾತಿಗು ಮೊದಲೇ ಹರಿವಿರದ
ಮೌನದೊಳರ್ಥವು ಹುದುಗಿರುವಂತೆ
ಭಾವಗಳಿಲ್ಲದ ಮುನಿಯಂತೆ
ಮುನಿಗೂ ಮೌನಕು ಅಂತರವಿಲ್ಲದ
ಗರ್ಭದಿ ಮಲಗಿಹ ಮಗುವಂತೆ
ಕವಿಕೃತ ಕಾವ್ಯದ ಕಲ್ಪನೆಯಂತೆಯೆ
ಸುಳ್ಳೇ ಸುಂದರವಾದಂತೆ
ಎಚ್ಚರದಲ್ಲಿಯು ಎಚ್ಚರವಾಗದೆ
ಚಿತ್ರವೆ ಜೀವವ ತಳೆದಂತೆ
ಬತ್ತದ ಕಣವನೆ ಬಿತ್ತುತಲನ್ನವ
ಬೆಳೆಯುತ ತಾನೇ ಬೇಯಿಸುವ
ಅಗಿಯುತ ತಿನ್ನುತ ತನ್ನೊಳಗಿಳಿಸುತ
ಕಣಕಣದೊಳಗೂ ಹಾಯಿಸುವ
ಹಾಗೆಯೆ ಈ ಜಗಕೊಬ್ಬನೆ ಶಿವಗುರು-
ವೆಲ್ಲವು ತಾನೇ ಆಗಿಹನು
ತನ್ನನು ತಾನೇ ನೋಡುತಲಿರುವನು
ನೋಡಿರುವುದಕೂ ತಾಗಿಹನು
ನೋಡುವ ಗುರುವಿನ ನೋಟಗಳಾಟದ
ಚೆಂಡುಗಳಂತೆಯೆ ಜನನಗಳು
ಗಾಳಿಯ ತುಂಬಲು ತಿರುಗುತ ಪುಟಿಯುತ-
ಲೊಡೆಯುವ ಹಾಗೆಯೆ ಸಾವುಗಳು
ಜನನಕು ಮರಣಕು ನಡುವಿನ ಘಟನಾ-
ವಳಿಗಳು ಗುರುವೊಳಗಂಟಿಲ್ಲ
ಕಾಲಗಳುರುಳದ ಸ್ಥಿತಿಯಿಂದೇಳುತ
ಬೀಳುತಲಿರುವುವು ನಿಜವಲ್ಲ
ಸುಖಗಳನುಂಡಿಹ ಮನವದು ಸುಖವನು
ಅಳತೆಯ ಮಾಡುವ ಹಾಗೆಲ್ಲ
ಹೋಲಿಕೆಯಲ್ಲಿಯೆ ಬದುಕನು ಸವೆಸುವ
ನಮಗಿನಿತೂ ಕಾಣುವುದಿಲ್ಲ
ಕಂಡಿಹುದೊಂದೂ ಕಂಡಂತಿಲ್ಲ
ಕಾಣುವ ಕಣ್ತೆರೆಯದ ಹೊರತು
ನಿರ್ಗುಣವಿಶ್ವದ ವಿವರಣೆಯಾಗದು
ನಮ್ಮೊಳ ನಾವ್ ಕಾಣದೆ ಕುಳಿತು
ಡಿ ನಂಜುಂಡ
20/04/2020
More information about the Advaita-l mailing list